ಪರಿಚಯ: Next Engineers' ಕಾರ್ಯಕ್ರಮದ ಭಾಗವಾಗಿ, ಈ ಎಂಜಿನಿಯರಿಂಗ್ ಅಕಾಡೆಮಿಯು ವಿದ್ಯಾರ್ಥಿಗಳ ಬೆಳವಣಿಗೆಗೆ ಹೇಗೆ ಬೆಂಬಲ ನೀಡುತ್ತದೆ ಎಂಬುದನ್ನು ತಿಳಿಯಲು FHI 360 ಒಂದು ಸಂಶೋಧನಾ ಅಧ್ಯಯನವನ್ನು ನಡೆಸಲಿದೆ. ನಿಮ್ಮ ಮಗ/ಮಗಳು 'Next Engineers' ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುತ್ತಿರುವುದರಿಂದ, ನಿಮ್ಮ ಮಗ/ಮಗಳು ಈ ಅಧ್ಯಯನದಲ್ಲಿ ಭಾಗವಹಿಸಲು FHI 360 ನಿಮ್ಮ ಅನುಮತಿಯನ್ನು ಕೋರುತ್ತಿದೆ. ಈ ಅಧ್ಯಯನವು ಏನನ್ನು ಒಳಗೊಂಡಿದೆ ಎಂಬುದನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ, ಇದರಿಂದ ನಿಮ್ಮ ಮಗ/ಮಗಳು ಇದರಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂದು ನೀವು ನಿರ್ಧರಿಸಬಹುದು.
ಅಧ್ಯಯನದ ವಿವರಣೆ: ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಬಗ್ಗೆ ತಿಳಿಯಲು ಮತ್ತು ಹೊಸ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುವ ಉತ್ತಮ ಮಾರ್ಗಗಳನ್ನು ಗುರುತಿಸಲು ನಾವು ಈ ಸಂಶೋಧನಾ ಅಧ್ಯಯನವನ್ನು ನಡೆಸುತ್ತಿದ್ದೇವೆ. ಈ ಅಧ್ಯಯನದಲ್ಲಿ ಒಳಗೊಂಡಿರುವ ಸಂಶೋಧನಾ ಚಟುವಟಿಕೆಗಳನ್ನು ಪ್ರತಿವರ್ಷ ನಡೆಸಲಾಗುತ್ತದೆ ಮತ್ತು ಇವು ವಿದ್ಯಾರ್ಥಿಗಳ ಸಮೀಕ್ಷೆ, ವಿದ್ಯಾರ್ಥಿಗಳ ಸಂದರ್ಶನ ಮತ್ತು ವಿದ್ಯಾರ್ಥಿಗಳ ವಿಷಯಾಧಾರಿತ ಗುಂಪು ಚರ್ಚೆ ಅಥವಾ ಫೋಕಸ್ ಗ್ರೂಪ್ ಅನ್ನು ಒಳಗೊಂಡಿರುತ್ತವೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ 'Next Engineers' ಕಾರ್ಯಕ್ರಮದ ಬಗ್ಗೆ ಅವರ ಅನುಭವಗಳು ಅಥವಾ ಶಾಲೆಯಲ್ಲಿನ ಇಂತಹ ಸಮಾನ ತರಗತಿಗಳ ಅನುಭವದ ಬಗ್ಗೆ ಕೇಳಲಾಗುತ್ತದೆ. ವಿದ್ಯಾರ್ಥಿಗಳ ಶಾಲಾ ಪ್ರಗತಿಯ ಬಗ್ಗೆ ಮತ್ತು ಅವರು ಯಾವ ಕೋರ್ಸ್‌ಗಳಿಗೆ ಸೇರಿಕೊಂಡಿದ್ದಾರೆ ಎಂಬಂತಹ ಇತ್ತೀಚಿನ ಶೈಕ್ಷಣಿಕ ಮಾಹಿತಿಯನ್ನು ಹಂಚಿಕೊಳ್ಳಲು ಕೇಳಲಾಗುತ್ತದೆ. ಸಮೀಕ್ಷೆಯನ್ನು ಪೂರ್ಣಗೊಳಿಸಲು ಸುಮಾರು 40 ನಿಮಿಷಗಳು ಬೇಕಾಗಬಹುದು, ಮತ್ತು ಸಂದರ್ಶನಗಳು ಹಾಗೂ ವಿಷಯಾಧಾರಿತ ಗುಂಪು ಚರ್ಚೆಗಳು ಒಂದು ಗಂಟೆಯವರೆಗೆ ಇರುತ್ತವೆ.
'Next Engineers' ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳನ್ನು ಈ ಸಂಶೋಧನೆಯಲ್ಲಿ ಭಾಗವಹಿಸಲು ನಾವು ಆಹ್ವಾನಿಸುತ್ತಿದ್ದೇವೆ. ಈ ಚಟುವಟಿಕೆಗಳಲ್ಲಿ ನಿಮ್ಮ ಮಗ/ಮಗಳ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ನಿಮ್ಮ ಮಗ/ಮಗಳು ಈ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸದಿದ್ದರೆ, 'Next Engineers' ಕಾರ್ಯಕ್ರಮಕ್ಕೆ ಅವರ ಆಯ್ಕೆಯ ಮೇಲೆ ಅಥವಾ ಭಾಗವಹಿಸುವಿಕೆಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ನಿಮ್ಮ ಮಗ/ಮಗಳು ಈ ಎಲ್ಲಾ, ಕೆಲವು ಅಥವಾ ಯಾವುದೇ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಬಹುದು. ನಿಮ್ಮ ಮಗ/ಮಗಳು ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸದಿರಲು ಅಥವಾ ಯಾವುದೇ ಸಮಯದಲ್ಲಿ ಸಂಶೋಧನೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಲು ನಿರ್ಧರಿಸಬಹುದು. ಪ್ರಶ್ನೆಗಳಿಗೆ ಉತ್ತರಿಸದಿರಲು ಅಥವಾ ಭಾಗವಹಿಸುವುದನ್ನು ನಿಲ್ಲಿಸಲು ನಿಮ್ಮ ಮಗ/ಮಗಳು ಯಾವುದೇ ಕಾರಣವನ್ನು ನೀಡುವ ಅಗತ್ಯವಿಲ್ಲ.
ಪರಿಹಾರ: ಮೊದಲು ತಿಳಿಸಿದಂತೆ, ನಿಮ್ಮ ಮಗ/ಮಗಳು 'Next Engineers' ಕಾರ್ಯಕ್ರಮಕ್ಕೆ ಆಯ್ಕೆಯಾದಲ್ಲಿ, ಸಮೀಕ್ಷೆ, ಸಂದರ್ಶನ ಅಥವಾ ವಿಷಯಾಧಾರಿತ ಗುಂಪು ಚರ್ಚೆಯಲ್ಲಿ ಭಾಗವಹಿಸಲು ಯಾವುದೇ ಸಂಭಾವನೆ ಇರುವುದಿಲ್ಲ. ಕಾರ್ಯಕ್ರಮಕ್ಕೆ ಆಯ್ಕೆಯಾಗದಿದ್ದರೂ ಸಹ ಸಂಶೋಧನೆಯಲ್ಲಿ ಭಾಗವಹಿಸಲು ನಿರ್ಧರಿಸುವ ವಿದ್ಯಾರ್ಥಿಗಳಿಗೆ, ಅವರ ಸಮಯಕ್ಕಾಗಿ ಅಲ್ಪ ಪ್ರಮಾಣದ ಗೌರವಧನ ಅಥವಾ ಸ್ಟೈಪೆಂಡ್ ಅನ್ನು ನೀಡಲಾಗುವುದು. ಮತ್ತೊಮ್ಮೆ ಹೇಳುವುದಾದರೆ, 'Next Engineers' ಕಾರ್ಯಕ್ರಮಕ್ಕೆ ನಿಮ್ಮ ಮಗ/ಮಗಳ ಆಯ್ಕೆಯಾಗುವುದು ಈ ಸಂಶೋಧನಾ ಅಧ್ಯಯನದಲ್ಲಿ ನೀವು ಅಥವಾ ನಿಮ್ಮ ಮಗ/ಮಗಳ ಭಾಗವಹಿಸುವುದರ ಮೇಲೆ ಅವಲಂಬಿತವಾಗಿರುವುದಿಲ್ಲ.
ಭಾಗವಹಿಸುವವರ ಆಯ್ಕೆ: ಈ ಸಂಶೋಧನೆಯನ್ನು 'Next Engineers' ಕಾರ್ಯಕ್ರಮಗಳಿರುವ ಹಲವಾರು ನಗರಗಳಲ್ಲಿ ನಡೆಸಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳ ಅರ್ಜಿಗಳನ್ನು ಸಲ್ಲಿಸಿ ಪರಿಶೀಲಿಸಿದ ನಂತರ, ಅರ್ಹವಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅಕಾಡೆಮಿಗೆ ಸೇರಲು ಸಮಾನ ಅವಕಾಶವನ್ನು ನೀಡಲಾಗುತ್ತದೆ. ಆದರೆ ದುರದೃಷ್ಟವಶಾತ್, ಲಭ್ಯವಿರುವ ಸೀಟುಗಳ ಸಂಖ್ಯೆ ಸೀಮಿತವಾಗಿರುವುದರಿಂದ ಕೆಲವು ವಿದ್ಯಾರ್ಥಿಗಳಿಗೆ ಅಕಾಡೆಮಿಯಲ್ಲಿ ಪ್ರವೇಶ ಸಿಗದಿರಬಹುದು. 'Next Engineers' ಅಕಾಡೆಮಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು (ಪ್ರತಿ ನಗರದಲ್ಲಿ ಪ್ರತಿ ವರ್ಷಕ್ಕೆ ಸುಮಾರು 50 ವಿದ್ಯಾರ್ಥಿಗಳು) ವಾರ್ಷಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಕೇಳಲಾಗುತ್ತದೆ. ಈ ಕಾರ್ಯಕ್ರಮಕ್ಕೆ ದಾಖಲಾಗದ ಇನ್ನೂ 50 ರಿಂದ 150 ವಿದ್ಯಾರ್ಥಿಗಳನ್ನು ಸಹ ಅದೇ ಸಮೀಕ್ಷೆಯಲ್ಲಿ ಭಾಗವಹಿಸಲು ಕೇಳಲಾಗುತ್ತದೆ. ಪ್ರತಿ ವರ್ಷ ಸುಮಾರು 24 ವಿದ್ಯಾರ್ಥಿಗಳನ್ನು ಸಂದರ್ಶನಗಳಲ್ಲಿ ಭಾಗವಹಿಸಲು ಮತ್ತು 20 ವಿದ್ಯಾರ್ಥಿಗಳನ್ನು ವಿಷಯಾಧಾರಿತ ಗುಂಪು ಚರ್ಚೆಗಳಲ್ಲಿ ಭಾಗವಹಿಸಲು ಕೇಳಲಾಗುತ್ತದೆ.



